ನೆಮ್ಮದಿ : ಸಣ್ಣಕಥೆ

Ramya Nekkarekadu
16 Min Read

“ಲಕ್ಷ್ಮತ್ತೆ‌… ಎಂತ‌ ಸಂಗತಿ‌..? ಭಾರೀ‌ ಖುಷಿಲಿ‌ ಇದ್ದ‌ ಹಾಂಗೆ ಕಾಣ್ತಿ..!” ಬೀಜ‌ ಕೊಯಿವಲೆ‌ ಕೊಕ್ಕೆ‌ದೆ‌, ಪಡಿಗೆದೆ‌ ಹಿಡ್ಕೊಂಡು ಲಕ್ಷ್ಮಕ್ಕನ‌ ಜಾಲು‌ ದಾಂಟಿದ‌ ಕಿಶೋರ‌ ಲಕ್ಷ್ಮಕ್ಕನ‌ ಮೋರೆಯ‌ ಗೆಲುವು ಕಂಡು ಒಂದರಿ ನಿಂದಿಕ್ಕಿ‌ ಕೇಳಿದ‌.

ಲಕ್ಷ್ಮತ್ತೆಯ‌ ಮನೆಯ‌ ಮೇಗಣ‌ ಗುಡ್ಡೆ ಕಿಶೋರಂಗೆ‌ ಸೇರಿದ್ದು‌. ಲಕ್ಷ್ಮಕ್ಕನ‌ ಜಾಲಿಂದಾಗಿ‌ ಗುಡ್ಡೆ‌ ಹತ್ತುಲೆ‌ ಸುಲಾಭದ‌ ದಾರಿ‌ ಅವಂಗೆ‌. “ಹೋ‌ ಕಿಶೋರನಾ‌..!?” ಉದಿಯಪ್ಪಗಣ‌ ನಸು ಬೆಶಿಲಿಂಗೆ ಕೂದುಗೊಂಡು‌ ಮಾಂಬಳ‌ ಉದ್ದಿಗೊಂಡಿತ್ತ‌ ಲಕ್ಷ್ಮಕ್ಕ ಕಿಶೋರನ‌ ಕಂಡಪ್ಪದ್ದೇ‌ ಸೊಂಟಕ್ಕೆ‌ ಕೈ‌ ತಾಂಗಿಗೊಂಡು‌ ಎದ್ದು ನಿಂದತ್ತು‌. “ಖುಷಿಯ‌ ಸಂಗತಿ ಇದ್ದು ಕಿಶೋರ‌..! ನಾಳೆ ಎನ್ನ‌ ಮಗ‌, ಸೊಸೆ‌, ಪುಳ್ಯಕ್ಕ‌ ಊರಿಂಗೆ ಬತ್ತವಡ‌. ಎರಡು ವರ್ಷ‌ ಕಳ್ತು‌ ಅವು‌ ಹೋಗಿ‌. ಫಾರಿನಿಲಿ‌ ಇದ್ದರೆ‌ ಅದೊಂದು ಬಂಙ‌. ಗ್ರೇಶಿದಾಂಗೆ‌ ಹೋಗಿ ಬಪ್ಪಲೆ ಆವ್ತಿಲ್ಲೆ‌‌. ಮಕ್ಕೊಗೆ ಎಂತದೋ‌ ರಜೆ‌ ಅಡ‌ ಒಂದು‌ ವಾರ‌ ಹಾಂಗಾಗಿ ಈ‌ ಸರ್ತಿ ಮನಸ್ಸು ಮಾಡಿದವು‌ ಬಪ್ಪಲೆ‌. ನೀನು ಬೀಜ‌ ಕೊಯಿವಲೆ‌ ಹೆರಟದಾ‌ ಕಿಶೋರಾ‌..??” ಕೈಗೆ‌ ಮೆತ್ತಿದ‌ ಮಾವಿನಹಣ್ಣಿನ‌ ಎಸರು ಕೆಳಂಗೆ‌ ಅರಿಯದ್ದ‌ ಹಾಂಗೆ ಮುಷ್ಟಿ ಮಾಡಿ‌ ಹಿಡ್ಕೊಂಡು‌ ನಿಂದತ್ತು ಲಕ್ಷ್ಮಕ್ಕ‌.

ಲಕ್ಷ್ಮಕ್ಕನ‌ ಒಬ್ಬನೇ‌ ಮಗ‌ ಶಶಾಂಕ. ಈಗ‌ ಹೆಂಡತಿ ಮಕ್ಕಳೊಟ್ಟಿಂಗೆ‌ ವಿದೇಶದಲ್ಲಿ ಇಪ್ಪದು‌. ನಾಣಪ್ಪಣ್ಣ ಲಕ್ಷ್ಮಕ್ಕ ದಂಪತಿ ಈಗ‌ ಇಬ್ರೇ‌ ಮನೆಲಿ‌. “ಓಹ್‌ ಆಗಲಿ‌..! ಅಂಬಗ‌ ಒಂದು ವಾರ‌ ಲಕ್ಷ್ಮಕ್ಕ‌ಂಗೆ‌ ಕೂಪಲೆ‌ ನಿಂಬಲೆ‌ ಪುರುಸೊತ್ತಿಲ್ಲೆ‌.! ಆನು‌ ಬೀಜ‌ ಕೊಯ್ವಲೆ‌ ಹೆರಟದಿದಾ‌.. ಉದಿಯಪ್ಪಗ‌ ಒಂದರಿ ಬೀಜ‌ದ ಗುಡ್ಡೆಗೆ ಹೋಪಾಳಿ‌. ಹೊತ್ತಪ್ಪಗ‌ ಹೋಪಾಳಿ‌ ಕೂದರೆ‌ ಲೆಕ್ಕ‌ ಹಾಕೆರೂ‌ ನಾಲ್ಕು ಬೀಜ‌ ಸಿಕ್ಕ‌..! ಕಂಡುಗೊಕ್ಕೆ‌ ಬರವಾ‌ ನಮ್ಮಲ್ಲಿ‌..? ಎಷ್ಟೂದೆ‌ ಇದ್ದವು‌ ಇನ್ನೊಬ್ಬನ‌ ಜಾಗೆಲಿ‌ ಎಂತ‌ ಸಿಕ್ಕುತ್ತು ಹೇಳಿ ಓಂಗುಲೆ‌. ಹೊತ್ತಪ್ಪಗ‌ ಮತ್ತೊಂದರಿ‌ ಹೋಪದು‌, ಇರುಳು ಎಯ್ಪಂಜಿಗೊಕ್ಕೆ‌ ತಿಂಬಲೆ‌ ಎಂತಕೆ ಒಳಿಶುದು‌..?” ಕಿಶೋರ‌ ಹೆಗಲಿಂದ ಕೊಕ್ಕೆಯ ಕೆಳ‌ ಇಳಿಶಿದ‌.

“ನಿನ್ನ‌ ಮೆಚ್ಚೆಕ್ಕು‌ ಕಿಶೋರ‌. ಈಗಣ‌ ಜೆವ್ವನಿಗರಿಂಗೆ‌ ನೀನು ಮಾದರಿ‌. ನಿನಗೆ ಕೃಷಿಲಿ‌ ಇಪ್ಪ‌ ಆಸಕ್ತಿ ನೋಡೆರೆ‌ ಎನಗೆ ನಮ್ಮ‌ ಮುಂದಾಣ ತಲೆಮಾರಿನ‌ ಬಗ್ಗೆ ಎಂತ‌ ಮಂಡೆಬೆಶಿಯೂ‌ ಇಲ್ಲೆ. ನಿನ್ನ‌ ಹಾಂಗಿಪ್ಪ‌ ಒಂದೆರಡು ಜೆವ್ವನಿಗರು‌ ಬೇಕು ಊರಿಂಗೆ‌.‌ ನಿನ್ನ‌ ಅಪ್ಪಂಗೆ‌ ಕೃಷಿಲಿ‌ ಇಪ್ಪ‌ ಆಸಕ್ತಿಯೇ‌ ನಿನಗೂ ಬಂದದು‌” ಲಕ್ಷ್ಮಕ್ಕಂಗೆ‌ ಕಿಶೋರಂಗೆ‌ ಕೃಷಿಲಿ‌ ಇಪ್ಪ‌ ಉಮೇದು ಕಂಡು ಖುಷಿ ಆತು‌. “ಎಂತದೇ‌ ಹೇಳಿ‌ ಲಕ್ಷ್ಮಕ್ಕ‌ ನಮ್ಮ‌ ಹವ್ಯಕರ‌ ತಾಂಗುದೇ‌ ಕೃಷಿ‌, ಹಾಂಗಿಪ್ಪಗ‌ ನಮ್ಮ‌ ಮೂಲ‌ ವೃತ್ತಿಯ‌ ನಾವು ಹೇಂಗೆ ಮರೆವದು‌ ಅಲ್ಲದಾ‌. ಇದಕ್ಕೆ‌ ಎನ್ನ‌ ಹೆಂಡತಿಯ ಸಹಕಾರ‌ ತುಂಬಾ ಇದ್ದು. ಎನ್ನ‌ ಆಸಕ್ತಿಯ‌ ನೀರೆರೆದು ಸಾಂಕುವ‌ ಕೆಲಸ‌ ಅದು ಮಾಡ್ತ‌ದು‌ ಎನ್ನ‌ ಪುಣ್ಯ‌. ಅದು‌ ಕಲಿವಲೆ‌ ಮಾಸ್ಟರ್ಸ್ ಮಾಡಿದ್ದು‌, ಆದರುದೇ‌ ಅದರ‌ ಆಸಕ್ತಿ, ಅಭಿರುಚಿ ಎನ್ನ‌ ಹಾಂಗೆಯೇ‌. ಹಾಂಗಾಗಿ ಆನು‌ ಬಚಾವ್” ಕಿಶೋರ ನೆಗೆ‌ ಮಾಡಿಗೊಂಡು ಹೇಳಿದ‌. “ಆಗಲಿ‌ ಈಗಣ‌ ಕಾಲಲ್ಲಿ ನಿನ್ನ‌ ಹೆಂಡತಿಯ‌ ಹಾಂಗಿಪ್ಪ ಕೂಸುಗೊ ಸಿಕ್ಕುದೂ‌ ಕಡಮ್ಮೆಯೇ‌” ಹೇಳಿತ್ತು ಲಕ್ಷ್ಮಕ್ಕ‌.

“ಈಗಣ‌ ಕಾಲಲ್ಲಿ‌ ಇದೆಲ್ಲಾ‌ ನಡೆಯ‌ ಮಾರಾಯ‌..! ಈ ಹತ್ತಡಕ್ಕೆಯ‌, ನಾಲ್ಕು ಬೀಜವ ನಂಬಿಗೊಂಡು‌ ಕೂದರೆ‌ ನಾಳೆ‌ ನಿನ್ನ‌ ಮಕ್ಕಳ‌ ಹೇಂಗೆ ಸಾಂಕುತ್ತೆ‌..? ಎನಗೆ ಆ‌ ಕಾಲಲ್ಲಿ‌ ಪೋಸ್ಟ್ ಆಫೀಸಿಲಿ‌ ಕೆಲಸ‌ ಇದ್ದತ್ತು‌, ಎನ್ನ‌ ಮಗನ‌ ಕಲಿವಷ್ಟು‌ ಕಲಿಶಿದೆ‌. ಈಗ‌ ಫಾರಿನಿಲಿ‌ ಸೆಟ್ಲ್ ಆಯಿದ‌. ಎಂತ‌ ರಗಳೆ ಇಲ್ಲೆ‌ ಬೇಕಾಷ್ಟು‌ ಬತ್ತು ಕೈಗೆ‌. ಹೆಂಡತಿ ಮಕ್ಕಳೊಟ್ಟಿಂಗೆ‌ ಆರಾಮ‌ದ ಜೀವನ‌” ಜೆಗಿಲಿಲಿ‌ ಕೂದುಗೊಂಡು ಅಡಕ್ಕೆ‌ ಹೋಳು‌ ಮಾಡಿಗೊಂಡಿತ್ತಿದ್ದ‌ ನಾಣಪ್ಪಣ್ಣ‌ ನಡೂಕೆ‌ ಬಾಯಿ‌ ಹಾಕಿದ‌.

ನಾಣಪ್ಪಣ್ಣ‌ ಹೇಳಿದ್ದು ಕೇಳಿ‌ ಕಿಶೋರನ‌ ಮೋರೆ‌ ರೆಜಾ‌ ಚಪ್ಪೆ‌ ಆತು‌. “ನಾಣಪ್ಪ‌ ಮಾವ‌‌ ಆನು ಹೀಂಗೆ ಹೇಳ್ತೇಳಿ‌ ತಪ್ಪು ‌ತಿಳ್ಕೊಳ್ಳೆಡಿ‌. ಎನಗೆ ಎನ್ನ‌ ಅಬ್ಬೆಪ್ಪನ‌ ಬಿಟ್ಟು ಬೇರೆ ಹೋಗಿ ಕೂಪಲೆ‌ ಮನಸ್ಸಿಲ್ಲೆ‌. ಕೃಷಿಯ‌ ನಾವು ಸಾಂಕೆರೆ‌ ಅದು ನಮ್ಮ‌ ಸಾಂಕುತ್ತು‌ ಹೇಳ್ತದು ಎನ್ನ‌ ವಾದ‌. ಎಂತದೇ‌ ಆದರುದೇ ಮನುಷ್ಯಂಗೆ‌ ಮುಖ್ಯ ಬೇಕಾದ್ದು ನೆಮ್ಮದಿ‌. ಎನಗೆ ಆ‌ ನೆಮ್ಮದಿ ಕೃಷಿಲಿಯೇ‌ ಸಿಕ್ಕುತ್ತಾ‌ ಇದ್ದು‌. ಎಂತ‌ ಇದ್ದು, ಎಂತ‌ ಇಲ್ಲೆ‌ ಹೇಳುದಕ್ಕಿಂತ‌ ಎಷ್ಟು ನೆಮ್ಮದಿ ಇದ್ದು ನಮ್ಮ‌ ಜೀವನಲ್ಲಿ‌ ಹೇಳ್ತದೇ‌ ಅಕೇರಿಯಂಗೊರೆಗುದೇ‌ ಒಳಿವದು‌‌. ನಾಳೆ‌ ಎನ್ನ‌ ಮಕ್ಕಳೂ‌ ಕೃಷಿಲಿ‌ ಮುಂದುವರಿತ್ತೆ‌ ಹೇಳ್ರೆ‌ ಆನು ಬೇಡ‌ ಹೇಳೆ‌. ಅಬ್ಬೆಪ್ಪಂದ‌ ದೂರ‌ ಕೂದು‌ ಅವರ‌ ಒಬ್ಬಂಟಿ‌ ಮಾಡುದರಲ್ಲಿ‌ ಎನಗಂತೂ‌ ಖುಷಿ ಇಲ್ಲೆ‌ ನಾಣಪ್ಪ‌ ಮಾವ‌” ಕೆಳ‌ ಮಡುಗಿದ‌ ಕೊಕ್ಕೆಯ‌ ಪುನಃ ನೆಗ್ಗಿ‌ ಹೆಗಲಿಲಿ‌ ಮಡುಗಿದ ಕಿಶೋರ‌.

“ಅದೆಲ್ಲಾ‌ ಹೇಳುಲೆ ಸುಲಾಭ‌ ಮಾರಾಯ‌, ನಿನ್ನದು ಈಗ‌ ಬೆಶಿ ನೆತ್ತರು‌! ಮುಂದಂಗೆ‌ ನಲವತ್ತು ಕಳುದಪ್ಪಗ‌ ಆನು‌ ಹೇಳಿದ್ದು ಅಪ್ಪೂಳಿ‌ ಕಾಣದ್ದರೆ‌ ನೋಡು‌ ಮತ್ತೆ‌” ಎಲೆಗೆ ಸುಣ್ಣ‌ ಉದ್ದಿಗೊಂಡು‌ ಮೋರೆಲಿ‌ ಕೊಂಕು ನೆಗೆ‌ ಮಾಡಿ‌‌ ಹೇಳಿದ‌ ನಾಣಪ್ಪಣ್ಣನ‌ ಮಾತಿಲಿ‌ ಗತ್ತು‌ ಎದ್ದು ಕಂಡುಗೊಂಡಿತ್ತು‌. ಕಿಶೋರ‌ ಬಾಯಿಗೆ ಬಾಯಿ‌ ಮಾತಾಡ್ಲೆ‌ ಹೋಯ್ದನೇಲ್ಲೆ‌. “ಲಕ್ಷ್ಮತ್ತೆ ಬತ್ತೆತಾ‌…” ಹೇಳಿಕ್ಕಿ‌ ಸೀದ‌ ಗುಡ್ಡೆ ಹತ್ತಿದ‌. “ನಿಂಗ‌ ಎಂತಕೆ ಹಾಂಗೆ ಹೇಳಿದ್ದು‌. ಪಾಪ‌ ಮಾಣಿಯ‌ ಮೋರೆ ಚಪ್ಪೆ‌ ಆತು‌. ನೆರೆಕರೆಯವಕ್ಕೆ‌ ಕಚ್ಚಿಗೊಂಬದೇ‌ ಹೀಂಗೆ‌ ಸಣ್ಣ ಸಣ್ಣ‌ ವಿಷಯಂಗ‌. ಕಿಶೋರ‌ ಆದ‌ ಕಾರಣ‌ ಅವ‌ ಪೆದಂಬು‌ ಮಾತಾಡದ್ದೆ‌ ಹೋದ‌” ಲಕ್ಷ್ಮಕ್ಕ‌ ಪರೆಂಚಿಗೊಂಡು‌ ಮಾಂಬುಳ‌ ಉದ್ದುಲೆ‌ ಕೂದತ್ತು‌.

********

ಲಕ್ಷ್ಮಕ್ಕ‌ ಇಂದು ಉದಯಕಾಲಕ್ಕೆ‌ ಎದ್ದುಗೊಂಡತ್ತು‌. ಮಗ‌, ಸೊಸೆ‌, ಪುಳ್ಯಕ್ಕ‌ ಬಪ್ಪ‌ ಖುಷಿ‌ ಅದಕ್ಕೆ‌. ಅವು‌ ಬಪ್ಪಗ‌ ಉದಿಯಪ್ಪಗ ಗಂಟೆ ಹತ್ತಾಕ್ಕು‌ ಹೇಳಿ‌ ಗೊಂತಿದ್ದರುದೇ‌ ನಾಕು ಗಂಟೆಗೆ‌ ಎದ್ದು ಮಂಡಗೆಗೆ‌ ನೀರು ಭರ್ತಿ ಮಾಡಿ‌, ಬೆಶ್ನೀರಿಂಗೆ‌ ಕಿಚ್ಚು ಹಾಕಿ‌‌ಗೊಂಡೇ‌ ದಿನ‌ ಸುರು ಮಾಡಿತ್ತು‌.

“ಲಕ್ಷ್ಮೀ‌.. ಇಷ್ಟು ಉದಿಯಪ್ಪಗ ಎಂತಕೆ ಎದ್ದುಗೊಂಡದು‌..? ಒಂದು ರೆಜ್ಜ‌ ಹೊತ್ತು ಒರಗಿಕ್ಕು‌ ಮಾರಾಯ್ತಿ‌. ಆರು‌ ಗಂಟೆಗೆ‌ ಎದ್ದರೆ ಧಾರಾಳ‌ ಸಾಕು” ಮಂಚಲ್ಲಿ‌ ಮನಿಕ್ಕೊಂಡೇ‌ ಹೇಳಿದ‌ ನಾಣಪ್ಪಣ್ಣ‌. “ಇನ್ನು ಒರಗೆರಾಗ‌. ಕೆಲಸ‌ ಬೇಕಾಷ್ಟಿದ್ದು‌. ಅಟ್ಟಿಣಳಗೆಲಿ‌ ಕೊಟ್ಟಿಗೆ‌ ಬೇವಲೆ‌ ಮಡುಗೆಕ್ಕು‌. ಶಶಾಂಕಂಗೆ ಕೊಟ್ಟಿಗೆ‌-ಕಾಯಾಲು‌ ಹೇಳ್ರೆ‌ ಭಾರೀ‌ ಇಷ್ಟ‌. ಮಕ್ಕೊಗೂ‌ ಅಪ್ರೂಪ. ಉಡುಗಿ‌, ಉದ್ದಿ‌ ಮನೆ‌ ಒಂದರಿ ಒತ್ತಾರೆ‌ ಆಯ್ಕು‌‌. ಕಿಶೋರನಲ್ಲಿಂದ‌ ಎರಡು ಲೀಟರ್ ಹಾಲು ತೆಕ್ಕೊಂಡು ಬರೆಕ್ಕು‌. ಮಕ್ಕೊಗೆ ಅಂಬಗಂಬಗ‌ ಕುಡಿವಲೆ‌, ಶಶಾಂಕಂಗುದೇ ಸಹನಂಗುದೇ‌ ಕಾಪಿ‌ ಚಾಯಕ್ಕೆ ಒಟ್ಟಿಂಗೆ‌ ನಮಗುದೇ‌ ಆಯೆಕ್ಕು‌, ಮತ್ತೆ‌ ಮಧ್ಯಾಹ್ನಕ್ಕೆ ಸೀವು‌ ಮಾಡ್ಲುದೇ‌ ಆಯೆಕ್ಕು‌. ಹಾಂಗಾಗಿ ಎರಡು ಲೀಟರ್ ಬೇಕಾಕ್ಕು‌ ಹೇಂಗುದೇ‌. ಅವು‌ ಬಪ್ಪ‌ ಮದಲೇ‌ ಎಲ್ಲಾ‌ ಅಟ್ಟಣೆ ಮಾಡಿ ಆಯ್ಕು‌. ಅಟ್ಟುಂಬಳಲ್ಲಿಯೇ‌ ಕೂದರೆ ಪುಳ್ಯಕ್ಕಳೊಟ್ಟಿಂಗೆ ಆಡ್ಲೆ‌ ಎನಗೆ ಪುರುಸೊತ್ತಾಗ” ಲಕ್ಷ್ಮಕ್ಕನ‌ ಮಾತು ಮುಗಿವ‌ ಮದಲೇ‌ ನಾಣಪ್ಪಣ್ಣಂಗೆ‌ ಒರಕ್ಕು‌ ಹಿಡ್ದಿತ್ತು‌.

*********

ಉದಿಯಪ್ಪಗ ಹತ್ತೂವರೆ ಅಂದಾಜಿಂಗೆ‌ ಏರ್ ಪೋರ್ಟಿಂದ‌ ಕ್ಯಾಬ್ ಮನೆಯ‌ ಜಾಲಿಂಗೆ‌ ಬಂದು ನಿಂದತ್ತು‌. ನಾಣಪ್ಪಣ್ಣ‌ ಚಾವಡಿಲಿ‌ ಕೂದುಗೊಂಡು‌ ಮೊಬೈಲು ಗುರುಟಿಗೊಂಡಿತ್ತಿದ‌. “ಲಕ್ಷ್ಮೀ‌.. ಬಂದವಿದಾ‌ ನೋಡು” ಮೊಬೈಲು ಕರೆಲಿ‌ ಮಡುಗಿಕ್ಕಿ‌ ಹೆರ‌ ಬಂದ‌ ನಾಣಪ್ಪಣ್ಣ‌. ಲಕ್ಷ್ಮಕ್ಕ‌ ಅಟ್ಟುಂಬಳಂದ‌ ಬೀಸ‌ ಬೀಸ‌ ಹೆರ‌ ಬಂತು‌. ಶಶಾಂಕ ಕ್ಯಾಬಿನ‌ ಡಿಕ್ಕಿಂದ‌ ಲಗೇಜು ತೆಕ್ಕೊಂಬಗ‌ ನಾಣಪ್ಪಣ್ಣಂದೆ‌ ಕೈ‌ ಜೋಡ್ಸಿದ. ಸಹನಾ‌ ಆರು‌ ವರ್ಷದ ಸಣ್ಣ‌ ಮಾಣಿ‌ ಅಮೋಘನ‌ ಎತ್ತಿಗೊಂಡೇ‌ ಇಳುದತ್ತು‌. ಅದರ‌ ಬೆನ್ನಾರೆ‌ ಎಂಟು ವರ್ಷದ‌ ಕೂಸು‌ ಅನಘ‌ ಅರ್ಗೆಂಟು‌ ಮಾಡಿಗೊಂಡೇ‌ ಇಳುದತ್ತು‌. ಅದರ‌ ಅರ್ಗೆಂಟಿಂಗೆ‌ ಸಹನನ‌ ಮೋರೆ‌ ಕುಂಞಿ ಆಗಿತ್ತು‌.

“ಶಶಾಂಕೋ…” ಮಗನ‌ ಕಂಡಪ್ಪದ್ದೇ‌ ಅಬ್ಬೆಯ‌ ಕಣ್ಣು ರೆಜ್ಜ‌ ಚೆಂಡಿ‌ ಆತು‌. “ಹ್ಞಾಂ ಅಮ್ಮಾ‌..” ಹೇಳಿದ‌ ಮಗನ‌ ಸ್ವರ‌ ಬಚ್ಚಿತ್ತು‌. “ಸಹನಾ‌ ಹೇಂಗಿದ್ದೆ‌ ಅಬ್ಬೋ‌” ಸೊಸೆಯ‌ ಮಗಳ‌ ಹಾಂಗೆ ಕಾಂಬ‌ ಲಕ್ಷ್ಮಕ್ಕ‌ ಅದರ‌ ತಲೆ‌ ಉದ್ದಿತ್ತು‌. “ಉಷಾರಿದ್ದೆ‌ ಅತ್ತೆ‌” ಮಗಳ‌ ತರ್ಕಂದ‌ ಅದರ‌ ಉತ್ಸಾಹ ಎಲ್ಲಾ‌ ಹೋಗಿತ್ತು‌. “ಕುಂಞಿ ಒರಗಿದ್ದನಾ‌..??” ಲಕ್ಷ್ಮಕ್ಕ‌ ಮಾಣಿಯ‌ ಬೆನ್ನು ಮುಟ್ಟಿ ಕೇಳಿತ್ತು‌. “ಅಪ್ಪು‌ ಅತ್ತೆ‌. ಅಲ್ಲಿ‌ ಎಂಗಳದ್ದು‌ ಒರಗುವ‌ ಹೊತ್ತು‌ ಇದು‌, ಹಾಂಗಾಗಿ ಇವ‌ ಒರಗಿದ್ದ‌. ಅನಘಂಗೆ‌ ಒರಕ್ಕಿಂಗೆ‌ ಕಣ್ಣು‌ ಉರಿತ್ತು‌ ಆದರೂ‌ ಒರಗದ್ದೇ‌ ಅಂತೇ‌ ಇಲ್ಲದ್ದೆ‌ ತರ್ಕ‌ ಮಾಡ್ತಾ‌ ಇದ್ದು‌” ಹೇಳಿ‌ ಹೇಳ್ವಗ‌ ಸಹನನ‌ ಮೋರೆಲಿ‌ ಅಸಹಾಯಕತೆ ಕಂಡತ್ತು‌.

“ಎಂತಕಬ್ಬೋ‌ ತರ್ಕ‌ ಮಾಡ್ತೆ‌…? ಇದಾ‌ ಇಲ್ಲಿ‌ ನೋಡು‌ ಮನೆ ಅಜ್ಜಿಯ‌ ನೆಂಪಿದ್ದಾಳಿ‌ ನೋಡು‌ ನೋಡ‌. ಅಂದು ಬಂದಿಪ್ಪಗ‌ ತೋಟಕ್ಕೆ ಕರಕ್ಕೊಂಡು ಹೋದ್ದು‌ ನೆಂಪಿದ್ದಾ‌..??” ಅನಘನ‌ ಕೆಪ್ಪಟೆ‌ ಮುಟ್ಟುಲೆ‌ ಹೋಪಗ‌ ಅಜ್ಜಿಯ‌ ಕೈಯ‌ ಅತ್ಲಾಗಿ‌ ನೂಕಿ‌ ಅಮ್ಮನ‌ ಹಿಂದೆ‌ ಹೋಗಿ‌ ನಿಂದು ಮತ್ತುದೇ‌ ಕೂಗುಲೆ‌ ಸುರು‌ ಮಾಡಿತ್ತು‌ ಅನಘ‌. “ಅತ್ತೆ‌ ಒಂದು ರೆಜ್ಜ‌ ಹೊತ್ತು ಅವರಷ್ಟಕೆ‌ ಇರಲಿ‌ ಮಕ್ಕ‌, ರೂಂ ರೆಡಿ‌ ಆದರೆ ಒರಗುಸುತ್ತೆ‌” ಹೇಳಿ‌ ಸಹನಾ‌ ಹೇಳಿಯಪ್ಪಗ‌ ಲಕ್ಷ್ಮಕ್ಕನ‌ ಮೋರೆ‌ ಚಪ್ಪೆ‌ ಆಗದ್ದಿತ್ತಿಲ್ಲೆ‌. “ಆಗಲಿ‌ ನೀನು ಒರಗುಸು‌ ಮಕ್ಕಳ‌‌. ಬನ್ನಿ‌ ಒಳ‌ ಬನ್ನಿ‌ ಎಲ್ಲರುದೇ‌” ಬೇಜರವ‌ ಮೋರೆಲಿ‌ ತೋರ್ಸದ್ದೆ‌ ಲಕ್ಷ್ಮಕ್ಕ‌ ಒಳ‌ ಹೋತು‌.

“ಸಹನಾ‌.. ಕೋಣೆಲಿ‌ ಹಸೆ‌ ಮಾಡಿದ್ದೆ‌ ನಿಂಗಳೂ‌ ಒರಗುತ್ತರೆ‌ ಒರಗಿ‌. ನೀರು ಕೊದಿಪ್ಪ‌ ಇದ್ದು‌, ಮಿಂದಿಕ್ಕಿ‌ ಕಾಪಿ ಕುಡುದಿಕ್ಕಿ‌ ರೆಜ್ಜ‌ ಬೆನ್ನು ಸರ್ತ‌ ಮಾಡಿಗೊಳ್ಳಿ‌” ಲಕ್ಷ್ಮಕ್ಕ‌ ಕವಾಟಿಂದ‌ ಬೈರಾಸು‌ ತೆಗೆದು ಕೊಟ್ಟತ್ತು‌. “ಬೈರಾಸು‌ ತೈಂದೆಯ‌ ಅತ್ತೆ‌. ಕಾಪಿ‌ ಹೆರ‌ವೇ‌ ಕುಡುದಿಕ್ಕಿ‌ ಬೈಂದೆಯ‌ ಹೊಟ್ಟೆ ತುಂಬಿದ್ದು‌. ಮಿಂದಿಕ್ಕಿ‌ ರೆಸ್ಟ್ ಮಾಡ್ತೆಯ‌” ಹೇಳಿ‌ ಸಹನಾ‌ ಮಾಣಿಯ‌ ಮಂಚಲ್ಲಿ‌ ಮನುಗ್ಸಿತ್ತು‌. “ಅಲ್ಲ‌ ಕೊಟ್ಟಿಗೆ‌ ಮಾಡಿದ್ದೆ‌. ನಿಂಗೊಗೆ ಅಪರೂಪ‌ ಅಲ್ಲದಾ‌ ಒಂದೊಂದು ತುಂಡು ತಿಂದಿಕ್ಕಿ‌ ಆಗದಾ‌..??” ಲಕ್ಷ್ಮಕ್ಕಂಗೆ‌ ಅವೆಲ್ಲಾ‌ ಹೆರ‌ ತಿಂದಿಕ್ಕಿ‌ ಬಂದದು‌ ಹೇಳ್ರುದೇ‌ ಮನೆಲಿ‌ ತಿಂದ‌ ಹಾಂಗೆ‌ ಆಗ‌ ಹೇಳಿ ಆತೇನಾ. “ಎನಗುದೇ‌ ಮಕ್ಕೊಗುದೇ‌ ಬೇಡ‌. ಎಂಗೊಗೆ‌ ಹೊಟ್ಟೆಲಿ‌ ಎಡೆ‌ ಇಲ್ಲೆ‌.‌ ಶಶಾಂಕ ತಿಂತನಾ‌ ಕೇಳಿ‌” ಹೇಳಿದ‌ ಸಹನಂಗೆ‌ ಮಾತಡ್ಲೂ‌ ಉಮೇದು ಇತ್ತಿಲ್ಲೆ‌ ಹೇಳಿ‌ ಕಂಡ‌ ಲಕ್ಷ್ಮಕ್ಕ‌ ಸೀದಾ‌ ಹೆರ‌ ಹೋತು‌.

“ಶಶಾಂಕ ಅವಕ್ಕಾರಿಂಗೂ‌ ಕೊಟ್ಟಿಗೆ ಬೇಡಡ‌. ನೀನು ತಿಂಬೆಯಾ‌..? ಬಟ್ಲಿಂಗೆ‌ ಹಾಕಿ ತರೆಕ್ಕಾ‌..??” ಅಪ್ಪನೊಟ್ಟಿಂಗೆ‌ ಕೂದ‌ ಮಗನ‌ ಹತ್ರೆ ಕೇಳಿತ್ತು‌ ಲಕ್ಷ್ಮಕ್ಕ‌. “ಬೇಡ‌ ಅಮ್ಮಾ‌ ಎನಗೆ ಹಶು‌ ಇಲ್ಲೆ‌” ಹೇಳಿದ‌ ಶಶಾಂಕ. “ಕಾಯಾಲು‌ ಮಾಡಿದ್ದೆ‌ ಶಶಾಂಕೋ..! ನಿನಗೆ ಭಾರೀ ಪ್ರೀತಿ‌ ಅಲ್ಲದಾ‌..?” ಲಕ್ಷ್ಮಕ್ಕ‌ ಮತ್ತೆ ಕೇಳಿತ್ತು‌. “ಅದು‌ ಅಂದ್ರಣ‌ ಕಥೆ‌ ಅಮ್ಮ‌. ಈಗಳೂ‌ ಮದಲಿದ್ದ‌ ಹಾಂಗೇ ಇರೆಕ್ಕೂಳಿ‌ ಇದ್ದಾ‌..? ಈಗ‌ ಎನಗೆ ಅದೆಲ್ಲ‌ ಇಷ್ಟ‌ ಇಲ್ಲೆ‌” ಹೇಳಿದ‌ ಶಶಾಂಕ. ಲಕ್ಷ್ಮಕ್ಕಂಗೆ‌ ಬೇಜರಾದರುದೇ‌ ಅದರ‌ ತೋರ್ಸಿಗೊಂಡಿದಿಲ್ಲೆ‌.

ಉದಯ‌ ಕಾಲಕ್ಕೆದ್ದುಗೊಂಡು‌ ಸಂಭ್ರಮಲ್ಲಿ‌ ಕೊಟ್ಟಿಗೆ‌ ಮಾಡಿದ‌ ಲಕ್ಷ್ಮಕ್ಕನ‌ ಖುಷಿ‌ ನೀರಿಲಿ‌ ಹೋಮ‌ ಮಾಡಿದಾಂಗಾತನ್ನೇ‌ ಹೇಳಿ‌ ನಾಣಪ್ಪಣ್ಣಂಗೆ‌ ಕಂಡತ್ತು‌. ಹೆಂಡತಿಯ‌ ಮೋರೆ‌ ಚಪ್ಪೆ‌ ಆದ್ದರ‌ ಗುರುತಿಸಿದ‌ ನಾಣಪ್ಪಣ್ಣಂಗೆ‌ ಮಾತು ಕಟ್ಟಿ‌ ಹೋತು‌.

********

ಮಧ್ಯಾಹ್ನ ಮಕ್ಕ‌ ಇಬ್ರೂದೆ‌ ಎದ್ದವು‌. ಸಹನನೊಟ್ಟಿಂಗೆ‌ ಕೋಣೆಂದ‌ ಹೆರ‌ ಬಂದ‌ ಮಕ್ಕಳ‌ ಕೈಲಿ‌ ಮೊಬೈಲು ಇತ್ತು‌. “ಒಕ್ಕುಂಞಿ ಆತಾ‌ ಮಕ್ಕಳೇ‌..?? ಅಜ್ಜಿಯತ್ರೆ‌ ಮಾತಾಡಿ‌ ಬನ್ನಿ‌. ಗುರ್ತ‌ ಇದ್ದ‌ ಕೂಚಕ್ಕಂಗೆ‌ ಈ‌ ಅಜ್ಜಿಯ‌..? ಅಮೋಘಂಗೆ‌ ನೆಂಪಿರ‌ ಅಲ್ಲದಾ‌..??” ಲಕ್ಷ್ಮಕ್ಕ‌ ಮಕ್ಕಳ‌ ಹತ್ರೆ‌ ಹೋತು. ಮಕ್ಕೊಗೆ‌ ಮೊಬೈಲು‌ ನೋಡುದರಲ್ಲಿ‌ ಹತ್ತರೆ‌ ಆರು ಇದ್ದವು ಹೇಳಿಯೂ‌ ಗೊಂತಾಯ್ದಿಲ್ಲೆ‌. “ಮೊಬೈಲಿಲಿ‌ ಎಂತ‌ ಇದ್ದು ನೋಡ ಹಾಂಗೆ ನೋಡ್ಲೆ‌..? ಇದಾ‌ ಮನೆ‌ ಅಜ್ಜನ‌ ಗುರ್ತ‌ ಇದ್ದಾ‌..? ನೋಡಿ‌ ಇಲ್ಲಿ‌” ಉಪ್ಪರಿಗೆ ಮೆಟ್ಲಿಲಿ‌ ಕೂದ‌ ಮಕ್ಕಳೊಟ್ಟಿಂಗೆ‌ ಲಕ್ಷ್ಮಕ್ಕನೂ‌ ಕೂದತ್ತು‌. ಆ‌ ಮಕ್ಕ‌ ಜಪ್ಪಯ್ಯ‌ ಹೇಳ್ರು‌ ಮೊಬೈಲಿಂದ ಕಣ್ಣು ಹಂದ್ಸಿದ್ದವೇಲ್ಲೆ‌.

ಸಹನಾ‌ ಊರಿಂಗೆ ಬಪ್ಪಗ‌ ತಂದ‌ ಕೆಲವು ಸರಬ್ರಾಯಂಗಳ‌ ಎಲ್ಲಾ‌ ಅತ್ತೆಯ‌ ಕೈಲಿ ತಂದು ಕೊಟ್ಟತ್ತು‌. “ಮಕ್ಕೊಗೆ‌ ಊರು ರೆಜ್ಜ ಅಡ್ಜಸ್ಟ್ ಆಯೆಕ್ಕಷ್ಟೇ‌ ಅತ್ತೆ‌. ಮೊಬೈಲು ಬೊಡಿವಗ‌ ಮಾತಡುಗು‌. ಇದಾ‌ ಮನೆಗೆ‌ ಬೇಕಾದ‌ ಸಾಮಾನುಗೋ‌, ನೆರೆಕರೆ‌ ಮಕ್ಕೊ‌ ಬಂದರೆ ಕೊಡ್ಲೆ‌ ಚಾಕ್ಲೇಟು‌ ಇದ್ದು” ಹೇಳಿತ್ತು ಸಹನಾ‌. ಲಕ್ಷ್ಮಕ್ಕ‌ ಸಹನ‌ ಕೊಟ್ಟ‌ ಚೀಲ‌ ತೆಕ್ಕೊಂಡತ್ತು‌. ಪುಳ್ಯಕ್ಕ ಬಂದ‌ ಲಾಗಯ್ತಿ‌ ಒಂದಕ್ಷರ‌ ಮಾತಡದ್ದ‌ ಬೇಜಾರು ಲಕ್ಷ್ಮಕ್ಕನ‌ ಕಾಡಿಗೊಂಡಿತ್ತು‌.

“ಉಂಬನ‌ ಶಶಾಂಕ..??” ಲಕ್ಷ್ಮಕ್ಕ‌ ಉಂಬಲೆ‌ ದಿನಿಗೇಳಿತ್ತು‌. ಎಲ್ಲರೂ‌ ಉಂಬಲೆ‌ ಅಟ್ಟುಂಬಳಕ್ಕೆ‌ ಬಂದವು‌. ಮಕ್ಕ‌ ಮಾತ್ರ‌ ಒಳ‌ ಬೈಂದವೇಲ್ಲೆ‌. ಲಕ್ಷ್ಮಕ್ಕ‌ ಹೆರ‌ ಹೋಗಿ‌, “ಹೆಜ್ಜೆ ಉಂಬಲೆ‌ ಬನ್ನಿ‌ ಮಕ್ಕಳೇ‌.. ಪಾಚ‌ ಮಾಡಿದ್ದೆ‌ ನಿಂಗೊಗೇಳಿ‌. ಮತ್ತೆ ಮೊಬೈಲು ನೋಡ್ಲಕ್ಕು‌” ಲಕ್ಷ್ಮಕ್ಕ‌ ಕೊಂಡಾಟಲ್ಲಿ‌ ದಿನಿಗೇಳಿತ್ತು‌. ಮಕ್ಕ‌ ಲಕ್ಷ್ಮಕ್ಕನ‌ ಮೋರೆದೆ‌ ನೋಡಿದ್ದವೇಲ್ಲೆ‌. “ಅತ್ತೆ‌ ಅವು‌ ಅವರಷ್ಟಕ್ಕೆ ಇರಲಿ‌, ಆನು‌ ಉಣ್ಸುತ್ತೆ‌ ಮತ್ತೆ‌” ಒಳಂದ‌ ಹೇಳಿತ್ತು‌ ಸಹನ‌. ಲಕ್ಷ್ಮಕ್ಕ‌ ತಳೀಯದ್ದೇ‌ ಒಳ‌ ಬಂತು‌.

ಉಂಬ‌ಗ‌ ನಾಣಪ್ಪಣ್ಣ‌, ಲಕ್ಷ್ಮಕ್ಕನ‌ ಮಾತಿಂಗಷ್ಟೇ‌ ಆಚೊಡೆಂದ‌ ಉತ್ತರ‌ ಇತ್ತು. ಪ್ರಯಾಣದ‌ ಬಚ್ಚೇಲು‌ ಇನ್ನೂ‌ ಹೋಗಿರ‌ ಹೇಳಿ‌ ಇಬ್ರುದೇ‌ ಸುಮ್ಮನಾದವು‌‌. ಸಹನಾ ಬಟ್ಲಿಂಗೆ‌ ಅಶನವುದೇ‌ ಮೊಸರುದೇ‌ ಹಾಕಿ ಕಲಸಿ‌ ಮಕ್ಕೊಗೆ‌ ಬಾಯಿಗೆ ಕೊಡ್ಲೆ‌ ಹೋತು‌. ಕುತ್ತಕಂಡೆ‌ ಲಾಗ‌ ಹಾಕೆರೂ‌ ಮಕ್ಕ‌ ಒಂದು ತುತ್ತು ಅಶನ‌ ಉಣ್ಣವು‌. ಎಂಗೊಗೆ‌ ಬೇಡ‌ ಹೇಳಿ‌ ಒಂದೇ‌ ಹಠ‌. “ಬೋಚು‌ ಕಲಸಿದ್ದೆ‌ ಮಗಾ‌..! ರೆಜ್ಜ‌ ಉಣ್ಣು‌ ಮತ್ತೆ‌ ಅಜ್ಜಿ‌ ನೂಡಲ್ಸ್ ಪಾಚ‌ ಮಾಡಿದ್ದವು‌ ಅದರ‌ ತಿಂಬಲಕ್ಕು‌” ಸಹನಾ‌ ಮಂಕಡ್ಸಿದ್ದಷ್ಟು‌ ಬಂತು‌.

“ಎಂತಾಯ್ಕಡ‌ ಅವಕ್ಕೆ‌..??” ಲಕ್ಷ್ಮಕ್ಕಂಗೆ‌ ಮಕ್ಕ‌ ಉಣ್ಣದ್ದಿಪ್ಪಗ‌ ಬೇಜಾರಾತು‌. “ಅವಕ್ಕೆ‌ ಕುಚ್ಚಿಲಕ್ಕಿ‌ ಮೆಚ್ಚುತ್ತಿಲ್ಲೆ‌ ಅತ್ತೆ‌” ಹೇಳಿತ್ತು‌ ಸಹನಾ‌. “ಶ್ಶೇ‌ ಆನು‌ ಬೆಳ್ತಿಗೆ ಮಡುಗೆಕ್ಕಾ‌ ಅಂಬಗಾ‌..??” ಲಕ್ಷ್ಮಕ್ಕ‌ ಕೇಳಿತ್ತು‌. “ಬೇಡ‌ ಅತ್ತೆ‌ ಅವಕ್ಕೆ‌ ಯಾವುದೂ‌ ಮೆಚ್ಚ. ಇನ್ಸ್ಟಾಂಟ್‌ ಫುಡ್ ಪ್ಯಾಕೆಟ್ ತೈಂದೆ‌ ಆನು‌ ಬಪ್ಪಗ‌. ಮಾಡಿ ಕೊಡ್ತೆ‌” ಸಹನಾ‌ ಬಟ್ಲಿನ‌ ತಂದ‌ ಹಾಂಗೆ‌ ಒಳ‌ ಕೊಂಡೋತು‌. “ಪಾಯಸ‌ ತಿಂತವಾ‌ ಏನ‌…??” ಸಹನನ‌ ಬೆನ್ನಾರೆ‌ ಹೋತು ಲಕ್ಷ್ಮಕ್ಕ‌‌. “ಎಂತ‌ ಬೇಡ‌ ಅತ್ತೆ. ಅವಕ್ಕಿಬ್ರಿಂಗೂ‌ ಇತ್ಲಾಗ್ಯಣ‌ ಆಹಾರ‌ ಅಭ್ಯಾಸ ಇಲ್ಲೆ‌. ಸುಮ್ಮನೆ ಒತ್ತಾಯ‌ ಮಾಡೆರೆ‌ ಪುನಾ‌ ಗೆಂಟು‌ ಮಾಡೆರೆ‌ ಕಷ್ಟ‌” ಹೇಳಿದ‌ ಮತ್ತೆ ಲಕ್ಷ್ಮಕ್ಕ‌ ಮಾತಡಿದ್ದಿಲ್ಲೆ‌.

ಹೊತ್ತೋಪಗ‌ ಸಹನಾ‌ ಮಕ್ಕಳ ಹತ್ರ‌ ಹೋಗಿ‌, “ಮೊಬೈಲೇ‌ ನೋಡಿಗೊಂಡು‌ ಕೂಪದಲ್ಲ‌. ಅಜ್ಜ‌ ಅಜ್ಜಿಯತ್ರೆ‌ ಮಾತಾಡಿ‌. ಮನೆಯಜ್ಜನ‌ ಗುರ್ತ‌ ಇಲ್ಲೆಯಾ‌ ಅನಘ‌ ನಿನಗೆ..? ಕಳ್ದ‌ ಸರ್ತಿ ಗುಡ್ಡೆಗೆ ಕರಕ್ಕೊಂಡು ಹೋಯ್ದವು‌ ಅಲ್ಲದಾ‌ ನೋಡು‌ ಅಜ್ಜನ‌ ನೋಡಿಯಪ್ಪಗ‌ ನೆಂಪಾವ್ತಾ‌..?? ವೀಡಿಯೋ ಕಾಲ್‌ ಮಾಡುವಾಗ‌ ಹಾಯ್ ಹೇಳ್ತೆ‌ ಅಲ್ಲದಾ‌ ನೀನು‌..? ನೆಂಪಿಲ್ಲೆಯಾ‌..?” ಸಹನಾ‌ ಕೇಳಿತ್ತು‌. ಮಕ್ಕೊಗೆ‌ ಇತ್ಲಗಿಯಣ‌ ಅಕಲೇ‌ ಇಲ್ಲೆ‌. “ಹೀಂಗೆ‌ ಮಾಡೆರೆ‌ ಮೊಬೈಲು ಹುಗ್ಗುಸಿ‌ ಮಡುಗುವೆ‌ ಅಷ್ಟೇ‌” ಸಹನಂಗೆ‌ ಕೋಪ‌ ಬಂತು‌. ಅಮ್ಮನ‌ ಕೋಪ‌ ನೋಡಿ‌ ಅನಘ‌ ಮೊಬೈಲು‌ ಕೆಳ‌ ಮಡುಗಿ‌ ಅಜ್ಜನ‌ ಮೋರೆ‌ ನೋಡಿತ್ತು‌. ಗುರ್ತ‌ ಇಲ್ಲೆ‌ ಹೇಳುವಾಂಗೆ‌ ತಲೆ‌ ಆಡ್ಸಿ, “ಗೊಂತಿಲ್ಲೆ‌” ಹೇಳಿತ್ತು‌. “ಬಾ‌ ಅಬ್ಬೋ‌ ಆನು‌ ನಿನ್ನ‌ ಹತ್ರಣ‌ ಮನೆಗೆ‌ ಕರಕ್ಕೊಂಡು ಹೋಗಿ ಉಂಬೆ‌ ಎಲ್ಲಾ ತೋರ್ಸುತ್ತೆ‌, ಅಂಬಗ‌ ಗುರ್ತ‌ ಅಕ್ಕು. ಪುಟ್ಟುಂಬೆ‌, ದೊಡ್ಡ ಉಂಬೆ‌ ಎಲ್ಲಾ‌ ಇದ್ದು‌. ಮಾಣಿ ಕುಂಞಿದೇ‌ ಬತ್ತೆಯಾ‌..?” ನಾಣಪ್ಪಣ್ಣ‌ ಮಕ್ಕಳ‌ ಕರಕ್ಕೊಂಡು ಹೋಪಲೆ ಎದ್ದು ನಿಂದವು‌. ಸಹನಾ‌ ಮಕ್ಕಳ‌ ಒತ್ತಾಯ‌ ಮಾಡಿ ಅಜ್ಜನೊಟ್ಟಿಂಗೆ‌ ಕಳ್ಸಿತ್ತು‌. ಅಜ್ಜನ‌ ಸರಿ‌ ಗುರ್ತ‌ ಇಲ್ಲದ್ದ‌ ಕಾರಣ‌ ಅಮ್ಮ‌ ಬೇಕು ಒಟ್ಟಿಂಗೆ ಹೇಳಿದ‌ ಕಾರಣ‌ ಸಹನಂದೇ‌, ಶಶಾಂಕದೇ ಹೋದವು. ಕಿಶೋರನ‌ ಮನೆಲಿ‌ ಹಟ್ಟಿ‌ ಇತ್ತ‌ ಕಾರಣ‌ ಅಲ್ಲಿಗೆ‌ ಹೋದವು‌. ಮನೆ‌ ಒಳ‌ ಹೋಗಿ ರೆಜ್ಜ‌ ಹೊತ್ತು ಮಾತಾಡ್ಸಿಯಪ್ಪಗ‌ ಮಕ್ಕೊಗೆ‌ ಉದಾಸೀನ ಅಪ್ಪಲೆ ಸುರಾತು‌. ಸಹನನ‌ ಹತ್ರೆ ಮೆಲ್ಲಂಗೆ‌ ಕುಸು‌ ಕುಸು‌ ಮಾಡ್ಲೆ‌ ಸುರು‌ ಮಾಡಿಯಪ್ಪಗ‌ ನಾಣಪ್ಪಣ‌ ಮಕ್ಕಳ ಹಟ್ಟಿಯತ್ರಂಗೆ‌ ಕರಕ್ಕೊಂಡು ಹೋದ‌.

ದೂರಂದಲೇ‌ ದನಯನ‌ ಕಂಡ‌ ಮಕ್ಕಳ‌ ಮೋರೆಲಿ‌ ರೆಜ್ಜ‌ ನೆಗೆ‌ ಕಂಡತ್ತು‌. “ಕೌ‌..‌ ಅಮ್ಮಾ‌ ಕೌ‌ ಇದ್ದು ಇಲ್ಲಿ‌…” ಅನಘ ಬೊಬ್ಬೆ ಹಾಕುಲೆ‌ ಸುರು‌ ಮಾಡಿತ್ತು‌. ಅಕ್ಕನೊಟ್ಟಿಂಗೆ‌ ತಮ್ಮನೂ‌ ಕೊಣಿವಲೆ‌ ಸುರು‌ ಮಾಡಿದ‌. ನಾಣಪ್ಪಣ್ಣ‌ ಮಕ್ಕಳ‌ ಪುಟ್ಟು‌ ಕಂಜಿಯತ್ರೆ‌ ಕರಕ್ಕೊಂಡು ಹೋಪಗ‌ ಅಮೋಘ‌ ಸಗಣಕ್ಕೆ‌ ಮೆಟ್ಟಿದ‌. ಅದು‌ ಅವಂಗೆ ಹೇಸಿಗೆ ಆಗಿ‌ ಆರ್ಭಟ‌ ತೆಗೆದ‌. ಸಹನಾ‌ ಅವನ ಕಾಲಿನ‌ ತೊಳೆಶೆರೂ‌ ಸಮಾಧಾನ‌ ಆಗ‌ ಅವಂಗೆ‌. “ಬಾ‌ ಅಬ್ಬೋ‌ ಪುಟ್ಟುಂಬೆ‌ ಮುಟ್ಟು‌” ನಾಣಪ್ಪಣ್ಣ‌ ಅನಘನ‌ ದಿನಿಗೇಳಿದ‌. ತಮ್ಮನ‌ ಆರ್ಭಟೆ‌ ಕಂಡು‌ ಅಕ್ಕ‌ ದೂರ‌ ನಿಂದತ್ತು‌. “ಬತ್ತಿಲ್ಲೆ‌ ಚಿಚ್ಚೀ‌…” ಹೇಳಿಕ್ಕಿ‌ ಸೀದ‌ ಮನೆ‌ ಒಳಂಗೆ‌ ಓಡಿತ್ತು‌.

*********

ಮನೆಲಿ‌ ಮಾಡಿದ‌ ಯಾವುದೇ ಆಹಾರ‌ ಮಕ್ಕ‌ ಮುಟ್ಟಿ ಸಾನು‌ ನೋಡದ್ದದು‌ ಲಕ್ಷ್ಮಕ್ಕಂಗೆ‌ ಬೇಜಾರಾತು‌. ಪುಳ್ಯಕ್ಕಳೊಟ್ಟಿಂಗೆ‌ ಆಡುವ‌ ನಿರೀಕ್ಷೆ‌ ಒಂದೇ‌ ದಿನಲ್ಲಿ‌ ಸುಳ್ಳಾದಪ್ಪಗ‌ ಲಕ್ಷ್ಮಕ್ಕ‌ನ‌ ಸಂಭ್ರಮ‌ ಎಲ್ಲಾ‌ ಕರಗಿ ಹೋತು‌. ಅಬ್ಬೆ ಅಪ್ಪ‌ ಮಕ್ಕಳ‌ ಬೆರವಲೆ‌ ಒತ್ತಾಯ‌ ಮಾಡೆರೂ‌ ಮಕ್ಕೊಗೆ‌ ಹಳ್ಳಿಯ‌ ವಾತಾವರಣ ಹಿಡಿಶಿತ್ತಿಲ್ಲೆ‌. ಮೊಬೈಲು ಹಿಡ್ಕೊಂಡೇ‌ ದಿನ‌ ಕಳೆವ ಪುಳ್ಯಕ್ಕಳ‌ ಕಂಡು ಅಜ್ಜ‌ ಅಜ್ಜಿಗೆ‌ ಬೇಜಾರಾತು‌.

“ಇದಾ‌ ಮಾಂಬುಳ ಇದ್ದು‌ ತಿಂತಿರಾ‌ ಮಕ್ಕಳೇ‌..” ಕಳ್ದ‌ ವರ್ಷ ಮಾಡಿದ‌ ಮಾಂಬುಳವ‌ ಕುಂಞಿ ಕುಂಞಿ ತುಂಡು ಮಾಡಿ ಮಕ್ಕೊಗೆ ಕೊಟ್ಟತ್ತು ಲಕ್ಷ್ಮಕ್ಕ‌. ಮಕ್ಕ‌ ಮಾಂಬುಳವ‌ ದೂರಂದಲೇ‌ ಕಂಡು ಬೇಡ‌ ಹೇಳಿದವು‌. “ಟೇಸ್ಟ್ ನೋಡು‌ ಅನಘಾ‌ ಹುಳಿ‌ ಹುಳಿ‌ ಫುಡ್ ಇಷ್ಟ‌ ಅಲ್ಲದಾ‌ ನಿನಗೆ‌..? ಮ್ಯಾಂಗೋ‌ ಜೆಲ್ಲಿಯ‌ ಹಾಂಗೆ‌ ಆವ್ತು‌ ಅಮೋಘ‌ ತಿಂದು ನೋಡು‌” ಶಶಾಂಕ‌ ಮಕ್ಕಳತ್ರೆ‌ ಹೇಳಿದ‌. ಮಾಂಬುಳದ‌ ಬಣ್ಣ‌ ಮಕ್ಕಳ‌ ಕಣ್ಣಿಂಗೆ ಖುಷಿ‌ ಕೊಟ್ಟತ್ತಿಲ್ಲೆ‌. ಅದರ‌ ನೋಡಿ‌ ಮೋರೆ‌ ಹುಳಿಪ್ಪಿತ್ತೇ‌ ಹೊರತು‌ ಅದರ‌ ತಿಂಬ‌ ಗೋಜಿಂಗೇ‌ ಹೋಯ್ದವೇಲ್ಲೆ ಇಬ್ರುದೇ‌.

“ಲಕ್ಷ್ಮೀ‌ ಹಣ್ಣಪ್ಪಳ‌ ತಿಂಗಾ‌ ಏನಾ‌..? ಅದಾದರೇ‌ ಚೀಪೆ‌ ಅದಾ‌. ಕೊಟ್ಟು‌ ನೋಡು‌” ನಾಣಪ್ಪಣ್ಣ‌ ಹೇಳಿದ‌. “ಬೇಡ‌ ಅತ್ತೆ‌. ಮಕ್ಕೊಗೆ‌ ಅದೆಲ್ಲಾ‌ ತಿಂದೇ‌ ಗೊಂತಿಲ್ಲೆ‌. ಅದರ‌ ರುಚಿ‌ ನೋಡ್ಲೂ‌ ಹೋಗವು‌. ಅನಘಾ‌ ಕಳ್ದ‌ ಸರ್ತಿ‌ ಬಂದಿಪ್ಪಗಳೂ‌ ಬೇಡ‌ ಹೇಳಿತ್ತಲ್ಲದ‌. ಸುಮ್ಮನೆ‌ ಹೆರ‌ ತೆಗೆಯೆಡಿ‌” ಹೇಳಿತ್ತು‌ ಸಹನ‌. “ನಿಂಗ‌ ಆದರೂ‌ ತಿನ್ನಿ‌. ನಿಂಗೊಗೆ‌ ಹೇಳಿಯೇ‌ ಮಾಡಿ‌ ಮಡುಗುದು‌ ಆನು‌” ಲಕ್ಷ್ಮಕ್ಕನ‌ ಸ್ವರಲ್ಲಿ‌ ಸತ್ವವೇ‌ ಇತ್ತಿಲ್ಲೆ‌. “ನಿಂಗ‌ ಸುಮ್ಮನೆ ಅದು ಇದು ಮಾಡುದು‌ ಹೇಳಿ‌ ಬಂಙ‌ ಬಪ್ಪದು‌ ಬೇಡ‌ ಅತ್ತೆ‌. ಎಂಗ‌ ಈಗ‌ ಆಹಾರಲ್ಲಿ‌ ತುಂಬಾ ಬದಲಾವಣೆ ಮಾಡಿಗೊಂಡಿದೆಯ‌. ಡಯೆಟ್ ಫುಡ್‌ ಗಳನ್ನೇ‌ ತಿಂತಾ‌ ಇಪ್ಪದು‌. ಪ್ರಿಸರ್ವ್ಡ್‌ ಫುಡ್ ಹೇಳ್ರೆ‌ ಹೀಂಗೆ‌ ವರ್ಷಗಳ‌ ಹಿಂದಣದ್ದರ‌ ಎಲ್ಲಾ‌ ತಿಂಬಲಿಲ್ಲೆ‌ ಈಗ‌. ಅಂತೆ‌ ನಿಂಗ‌ ಬಂಙ‌ ಬಂದು ಮಾಡಿ‌ ಇಡ್ಕುದೆಂತಕೆ‌…?” ಸಹನಾ‌ ಹೇಳಿತ್ತು‌.

‘ಮಕ್ಕೊಗೆ‌ ತಿಂಬಲೆ‌ ಉದಿಯಪ್ಪಗಂದ‌ ಕಸ್ತ್ಲಪ್ಪಗಂಗೊರೆಗೆ‌ ಪ್ಯಾಕೆಟ್ ಆಹಾರ‌ ಕೊಡುವಗ‌ ಇಲ್ಲದ್ದ‌ ಆಹಾರ‌ ಪ್ರಜ್ಞೆ ಈ‌ ಕೆಮಿಕಲ್ ಇಲ್ಲದ್ದ‌ ಮಾಂಬುಳ‌, ಹಣ್ಣಪ್ಪಳ‌ ತಿಂದದರಲ್ಲಿ‌ ಎಂತ‌ ಅಪ್ಪಲಿದ್ದೋ‌..?’ ನಾಣಪ್ಪಣ್ಣ‌ ಮನಸ್ಸಿನ‌ ಮಾತು ನಾಲಗೆ‌ ವರೆಗೆ‌ ಎತ್ತಿದ್ದಿಲ್ಲೆ‌‌.

ಊರಿಂಗೆ ಬಂದು ಎರಡು ದಿನ‌ ಕಳ್ದಿತ್ತಿಲ್ಲೆ‌, ಮಕ್ಕ‌ ಪುನಾ‌ ಯಾವಾಗ‌ ಮನೆಗೆ ಹೋಪದು‌ ಕೇಳುಲೆ‌ ಸುರು ಮಾಡಿತ್ತಿದವು‌. ಅವ‌ರ‌ ಜೀವನ‌ ಕ್ರಮ‌ ಸಂಪೂರ್ಣವಾಗಿ ಅವು‌ ಇತ್ತ‌ ಜಾಗೆಗೆ‌ ಒಗ್ಗಿ‌ ಹೋಗಿತ್ತಿದ್ದು‌. ಅಜ್ಜ‌ ಅಜ್ಜಿಯ‌ ಕಾಟಂಗೋಟಿ‌ ತಿಂಡಿಗ‌, ಆಟಂಗ‌ ಯಾವುದೂ‌ ಅವಕ್ಕೆ‌ ಬೇಕೂಳಿ‌ ಆಯ್ದೇಲ್ಲೆ‌‌. ಶಶಾಂಕ‌ ನಾಕು ದಿನಕ್ಕೆ‌ ಸಹನನ‌ ಅಪ್ಪನ‌ ಮನೆಲಿದ್ದು‌ ಬತ್ತೆಯ‌ ಹೇಳಿ‌ ಹೋದ‌. ಅದು ನಗರದ‌ ಪ್ರದೇಶ ಆದ‌ ಕಾರಣ‌ ಅಲ್ಲಿ ಮಕ್ಕ‌‌ ರೆಜ್ಜ‌ ಖುಷಿಲಿಕ್ಕು‌ ಹೇಳಿ‌ ಹೇಳಿಕ್ಕಿ‌ ಅವು‌ ಹೋದವು‌.

“ತೋಟಲ್ಲಿ‌ ಕಣ್ಣೆದುರಂದಲೇ‌ ಕೊಯ್ದ‌ ಬುಳಕ್ಕರೆ‌ ಪೇರಳೆ‌, ಕೆಂಪು ಕೆಂಪು‌ ನೆಗವ‌ ರುಚಿಯಾದ‌ ಬೀಜದ‌ ಹಣ್ಣು‌, ಅಡಕ್ಕೆ‌ ಮರಕ್ಕೆ‌ ಉದ್ದಿ‌ ಸೊನೆ‌ ತೆಗೆದು ಗೊರಟು‌ ಉಜುಂಬುಲೆ‌ ಕಾಟು‌ ಮಾಯ್ನಣ್ಣು‌, ತೋಟಲ್ಲಿಯೇ‌ ಬಿಡ್ಸಿ‌ ತಿಂಬ‌ ತುಳುವ‌ ಹಲಸಿನ‌ ಹಣ್ಣು‌, ಕುಂಡಿಗೆ‌ಯ‌ ಚೀಪೆ‌, ಹಾಳೆಲಿ‌ ಹೆರ್ಕಿ‌ ಮಡುಗಿದ‌ ಜಂಬು‌ ನೇರಳೆ‌, ಕಾಯಿ‌ ಸೊಲಿವಗ‌ ಸಿಕ್ಕಿ‌ದ ಮುಂಗೆ ಹೀಂಗಿಪ್ಪದರ‌ ಎಲ್ಲಾ‌ ಪುಳ್ಯಕ್ಕೊಗೆ‌ ರುಚಿ ತೋರ್ಸೆಕ್ಕು‌ ಹೇಳಿ‌ ಗ್ರೇಶಿದ್ದು‌ ಲಕ್ಷ್ಮೀ‌ ಆನು‌. ಆದರೆ ಹೀಂಗಿಪ್ಪದೆಲ್ಲಾ‌ ನಮ್ಮ‌ ಕಾಲಕ್ಕೇ‌ ಮುಗುದತ್ತಾ‌ ಹೇಳಿ‌ ಗ್ರೇಶಿ‌ ಮನಸ್ಸು ಸಂಕಟ‌ ಆವ್ತಾ‌ ಇದ್ದು‌. ಸೆಸಿಲಿ‌ ಎಳತ್ತು‌ ಚೋರೆ‌ ಪೇರಳೆಯನ್ನೂ‌ ಬಿಟ್ಟುಗೊಂಡಿತ್ತಿಲ್ಲೆ‌ ನಾವು‌. ಹಾಂಗಿಪ್ಪಗ‌ ಇವಕ್ಕೆ‌ ಆ‌ ಕೆಂಪು ತಿರುಳಿನ‌ ಬುಳಕ್ಕರೆ‌ ಪೇರಳೆಯೂ‌ ಬೇಡ‌. ಕಣ್ಣೆತ್ತಿ‌ ಸಾನು‌ ನೋಡ್ತವೇಲ್ಲೆ‌. ಹಲಸಿನ ಹಣ್ಣಿಂಗೆ ನೊರೆಂಜಿ‌ ಹಾರುದರ‌ ಕಂಡು‌ ಆ‌ ಮಕ್ಕಳ‌ ಮೋರೆಲಿ‌ ಆದ‌ ಹೇಸಿಗೆ‌ ನೋಡೆಕ್ಕಿತ್ತು‌ ನೀನು‌. ಎಷ್ಟು ಒಳ್ಳೊಳ್ಳೆ‌ ಭಾಗವ‌ ಈ ಮಕ್ಕ ಜೀವನಲ್ಲಿ‌ ಕಳಕ್ಕೊಳ್ತಾ‌ ಇದ್ದವು‌..!? ಮಣ್ಣು, ಕೆಸರು ಹೇಳಿ‌ ನೋಡದ್ದೆ‌ ಸೊಕ್ಕುವ‌ ಮಕ್ಕಳ‌ ಇನ್ನು‌ ಇನ್ನು ನಾವು ಕಾಂಬಲೇ‌ ಇಲ್ಲೆಯಾ‌ಳಿ‌ ಆವ್ತು‌” ಜೆಗಿಲಿಲಿ‌ ಕೂದುಗೊಂಡು‌ ಹೇಳಿದ‌ ನಾಣಪ್ಪಣ್ಣಂಗೆ‌ ಭಾರೀ‌ ಬೇಜಾರಾತು‌.

“ಶಶಾಂಕ‌ ನಮ್ಮೊಟ್ಟಿಂಗೆ ಊರಿಲಿಯೇ‌ ಇರೆಕ್ಕಾತು‌ ಹೇಳಿ‌ ಆವ್ತೆನಗೆ‌. ಅವಂಗೂ‌ ಈಗ‌ ನಮ್ಮ‌ ಮೇಲೆ ಅಷ್ಟೆಂತ‌ ವ್ಯಾಮೋಹ‌ ಇಲ್ಲೇಳಿ‌ ಆವ್ತು‌. ಎರಡು ಮೂರು ವರ್ಷಕ್ಕೊಂದರಿ‌ ಮಗನ‌ ನೋಡುವ‌ ದೌರ್ಭಾಗ್ಯ ನಮಗೆ. ಇಪ್ಪಲೆ ಆಸ್ತಿ, ಪೈಸೆ ಎಲ್ಲ‌ ಇದ್ದು‌. ಜೀವನಲ್ಲಿ‌ ಅಕೇರಿಗಾದರೂ‌ ಮಕ್ಕ‌, ಪುಳ್ಯಕಳೊಟ್ಟಿಂಗೆ‌ ಕಳೆವ‌ ಭಾಗ್ಯ ನಮಗಿಲ್ಲನ್ನೇ‌ ಹೇಳಿ‌ ಬೇಜಾರವ್ತಾ‌ ಇದ್ದು‌. ಆ‌ ಮಕ್ಕ ನಮ್ಮ‌ ಮೋರೆ‌ ನೋಡಿದೇ‌ ಮಾತಡ್ತವೇಲ್ಲೆ‌. ಅಜ್ಜ‌, ಅಜ್ಜಿ ಹೇಳ್ತ‌ ಭಾಂದವ್ಯ ಇಲ್ಲೆ‌. ಪುಳ್ಯಕ್ಕೊಗೆ‌ ಕಥೆ‌ ಹೇಳಿ‌ ಒರಗ್ಸುದು‌, ತಲೆಗೆ‌ ಎಣ್ಣೆ‌ ಹಾಕಿಕ್ಕಿ‌ ಕೊದಿಪ್ಪ‌ ನೀರಿಲಿ‌ ಮೀಶುದು‌, ಬುದ್ಧಿ ಹೇಳಿ ತಿದ್ದುದು‌ ಹೀಂಗಿಪ್ಪ‌ ಯಾವ‌ ಹಕ್ಕುದೇ‌ ನಮಗಿಲ್ಲೆ‌” ಲಕ್ಷ್ಮಕ್ಕನ‌ ಕಣ್ಣು ಚೆಂಡಿ‌ ಆತು‌.

“ಕಿಶೋರನ‌ ಅಪ್ಪ‌ ಕಿಟ್ಟಣ್ಣ‌ ಪುಣ್ಯವಂತ‌ ಹೇಳಿ‌ ಆವ್ತು‌ ಎನಗೀಗ‌. ಕಿಶೋರ‌ ಮೊನ್ನೆ ಹೇಳಿದ‌ ಮಾತು ಎಷ್ಟು ಸತ್ಯ ಲಕ್ಷ್ಮೀ..!! ‘ಎಂತದೇ‌ ಆದರುದೇ ಮನುಷ್ಯಂಗೆ‌ ಮುಖ್ಯ ಬೇಕಾದ್ದು ನೆಮ್ಮದಿ‌. ಎಂತ‌ ಇದ್ದು, ಎಂತ‌ ಇಲ್ಲೆ‌ ಹೇಳುದಕ್ಕಿಂತ‌ ಎಷ್ಟು ನೆಮ್ಮದಿ ಇದ್ದು ನಮ್ಮ‌ ಜೀವನಲ್ಲಿ‌ ಹೇಳ್ತದೇ‌ ಅಕೇರಿಯಂಗೊರೆಗುದೇ‌ ಒಳಿವದು‌’ ಅವನ‌ ಮಾತಿಲಿ‌ ಎಷ್ಟು ತೂಕ‌ ಇತ್ತು‌ ನೋಡು‌. ಕೊಳವಷ್ಟು‌ ಪೈಸೆ‌ ಮಾಡಿ‌ ಮಡುಗಿದೆ‌ ಆನು‌ ಆದರೆ ಅಕೇರಿಗೆ‌ ಒಂದು ನೆಮ್ಮದಿ‌ ಹೇಳ್ತದರ‌ ಸಂಪಾದುಸುಲೆ‌ ಎನ್ನಂದ‌ ಎಡಿಗಾತಿಲ್ಲೆ‌. ಎನ್ನಂದ‌ ಪ್ರಾಯಲ್ಲಿ‌ ಆಗಲಿ‌, ಅನುಭವಲ್ಲಿ‌ ಆಗಲಿ‌ ಆ‌ ಕಿಶೋರ‌ ಎಷ್ಟೋ‌ ಸಣ್ಣವ‌. ಆದರೆ‌ ಅವ‌ನ‌ ಗುರಿ‌ ಪೈಸೆ‌ ಸಂಪಾದನೆ ಮಾಡುದಕ್ಕಿಂತಲೂ‌ ನೆಮ್ಮದಿ ಸಂಪಾದನೆ ಮಾಡುದರಲ್ಲಿದ್ದು‌. ಅವ‌ ಜೀವನಲ್ಲಿ ಈಗಳೇ‌ ಗೆದ್ದಿದ‌ ಲಕ್ಷ್ಮೀ..!!” ಕಿಶೋರನ‌ ಗ್ರೇಶಿ‌ ಹೆಮ್ಮೆ ಆತು‌ ನಾಣಪ್ಪಣ್ಣಂಗೆ‌.

ಅದೇ‌ ಹೊತ್ತಿಂಗೆ‌ ಕಿಶೋರ‌ ಏವಾಗಣ‌ ಹಾಂಗೆ‌ ಕೊಕ್ಕೆ‌ ಹಿಡುಕ್ಕೊಂಡು‌ ಬೀಜ‌ ಕೊಯಿವಲೆ‌ ಬಂದ‌. “ನಾಣಪ್ಪ‌ ಮಾವ‌ ಉಷಾರಿದ್ದಿರಾ‌..? ಎಂತ‌ ಚಪ್ಪೆ‌ ಕಾಣ್ತು‌ ಮೋರೆ‌..?” ಹೇಳಿಕ್ಕಿ‌ ಅಲ್ಲಿಯೇ‌ ನಿಂದ‌ ಕಿಶೋರ‌. “ಹಾಂಗೆಂತ‌ ಇಲ್ಲೆ‌ ಕಿಶೋರ‌. ಶಶಾಂಕ‌ ಹೆಂಡತಿ ಮಕ್ಕಳೊಟ್ಟಿಂಗೆ‌ ಮಾವಗಳ‌ ಮನೆಗೆ‌ ಹೋದ‌ ಈಗ‌” ಹೇಳಿದ‌ ನಾಣಪ್ಪಣ್ಣ‌. “ಅದಕ್ಕೆಂತಕೆ‌ ಬೇಜಾರ‌ ಮಾವ‌..? ಒಂದು ವಾರಲ್ಲಿ‌ ಎಲ್ಲಾ‌ ಕಡೆಂಗೂ‌ ಹೋಗೆಡದ‌..? ಸಹನಕ್ಕನ‌ ಮನೆಯವುದೇ‌ ಕಾದುಗೊಂಡಿಕ್ಕು‌ ಅಲ್ಲದಾ‌..?” ಹೇಳಿದ‌ ಕಿಶೋರ‌. “ನೀನೇ‌ ಪುಣ್ಯವಂತ ಮಾರಾಯ‌ ಜೀವನಲ್ಲಿ‌. ಹೀಂಗೇ‌ ಇರು‌..!” ಹೇಳಿದ‌ ನಾಣಪ್ಪಣ್ಣ‌. ನಾಣಪ್ಪಣ್ಣನ‌ ಮಾತು‌ ಕಿಶೋರಂಗೆ‌ ಅಂದಾಜಿ‌ ಆಯ್ದಿಲ್ಲೆ‌. “ಇದೆಂತ‌ ಮಾವ‌ ಹೀಂಗೆ‌ ಹೇಳ್ತಿ‌..? ಮೊನ್ನೆ‌ ನಿಂಗಳೇ‌ ಅಲ್ಲದಾ‌ ಹೇಳಿದ್ದು‌ ಜೀವನಕ್ಕೆ‌ ಇಷ್ಟು ಸಾಲ‌ ಹೇಳಿ‌..!?” ಕಿಶೋರ‌ ಕೇಳಿದ‌. “ಜೀವನ ಆರನ್ನೂ‌ ನೋಡ್ತಿಲ್ಲೆ‌. ಪ್ರಾಯದವಕ್ಕೂ ಪಾಠ‌ ಕಲಿಶುತ್ತು. ಎಲ್ಲವುದೇ ಸಂಪಾದನೆ ಮಾಡಿಗೊಂಡಿದೆ‌ ಹೇಳಿ‌ ಗ್ರೇಶಿತ್ತಿದೆ‌‌ ಆದರೆ ನೀನು ಹೇಳಿದ‌ ಹಾಂಗೆ ನೆಮ್ಮದಿ‌ ಹೇಳ್ತದರ‌ ಸಂಪಾದನೆ‌ ಮಾಡುದರಲ್ಲಿ‌ ಸೋತೆ‌ ಕಿಶೋರ‌ ಆನು‌” ಹೆಗಲಿಲಿ‌ ಇತ್ತ‌ ಬೈರಾಸಿನ ತೆಗೆದು ಕುಡಿಗಿದ‌ ನಾಣಪ್ಪಣ್ಣನ‌ ಕಣ್ಣು ಜಾಲು‌ ನೋಡಿತ್ತು‌.

“ಮಾವ‌ ನಿಂಗಳ‌ ಬೇಜಾರಕ್ಕೆ‌ ಕಾರಣ‌ ಎಂತಾಳಿ‌ ಎನಗೆ ಗೊಂತಿಲ್ಲೆ‌. ಆದರೆ ನಿಂಗೊಗೆ ನಿಂಗಳ‌ ಮಗನ‌ ಹಾಂಗೆ ಆನಿದ್ದೆ‌. ನೆರೆಕರೆ‌ ಹೇಳಿ‌ ಇಪ್ಪಗ‌ ನಿಂಗ‌ ಎಂತಕೆ ಬೇಜರ‌ ಮಾಡಿಗೊಳ್ತಿ‌..? ಆನುದೇ‌ ನಿಂಗಳ‌ ಮಗನೇ‌ ಹೇಳಿ‌ ಗ್ರೇಶಿಗೊಳ್ಳಿ‌, ನಿಂಗ‌ ಈಗಳೇ‌ ಹೀಂಗೆ ಉತ್ಸಾಹ‌ ಕಳಕ್ಕೊಂಡರೆ‌ ಹೇಂಗೆ‌..? ನಾಳೆ‌ ಎನಗೆ ಹುಟ್ಟುವ‌ ಮಕ್ಕೊಗೆ‌ ಆಟ‌ ಆಡ್ಲೆ‌ ಎರಡೆರಡು ಅಜ್ಜ‌ ಅಜ್ಜಿ‌ಯಕ್ಕ‌ ‌ ಬೇಡದೋ‌‌..? ನಿಂಗೊಗೆ ಹಸಕ್ಕಪ್ಪಗ‌ ಬೀಗ‌ ಹಾಕಿಕ್ಕಿ‌ ಸೀದ‌ ಎದ್ದಿಕ್ಕಿ‌ ಮನೆಗೆ‌ ಬನ್ನಿ‌. ಮಾತಡ್ಲೆ‌ ಅಪ್ಪ‌, ಅಮ್ಮ‌, ಎನ್ನ‌ ಹೆಂಡತಿ ಎಲ್ಲರೂ‌ ಇದ್ದವು‌. ದಾಕ್ಷಿಣ್ಯ‌ ಮಾಡಿಕ್ಕೆಡಿ‌. ನೆಮ್ಮದಿಯ‌ ನಾವು ಹುಡ್ಕಿಗೊಂಡು‌ ಹೋಯೆಕ್ಕು‌. ಅದು‌ ನಮ್ಮ‌ ಕಾಲ‌ ಬುಡಕ್ಕೆ ಬಕ್ಕು‌ ಹೇಳುದು‌ ನಮ್ಮ‌ ಭ್ರಮೆ‌” ಹೇಳಿಗೊಂಡೇ‌ ಗುಡ್ಡೆ ಹತ್ತಿದ‌ ಕಿಶೋರನ‌ ಮಾತುಗೋ‌ ನಾಣಪ್ಪಣ‌ ಕಣ್ಣು ಒಡೆಶಿತ್ತು‌.

-ಮುಗುದತ್ತು‌..

-ರಮ್ಯ‌ ನೆಕ್ಕರೆಕಾಡು‌

Share This Article
2 Comments